ಬ್ರಿಸ್ಬೇನ್
	ಆಸ್ಟ್ರೇಲಿಯ ಖಂಡದ ಕ್ವೀನ್ಸ್‍ಲೆಂಡ್ ವಿಭಾಗದ ರಾಜಧಾನಿ. ಆಡಳಿತ ಕೇಂದ್ರ ಮತ್ತು ಪ್ರಮುಖ ನಗರ. ಬ್ರಿಸ್ಬೇನ್ ನದಿಯ ಇಕ್ಕೆಲಗಳಲ್ಲಿ ಹರಡಿಕೊಂಡಿದೆ. ಪೆಸಿಫಿಕ್ ಸಾಗರದ ತೀರದಲ್ಲಿರುವ ಬ್ರಿಸ್ಬೇನ್ ಸಿಡ್ನಿಯಿಂದ 800ಕಿಮೀ. ಉತ್ತರದಲ್ಲಿದೆ. ಈ ನಗರದ ಜನಸಂಖ್ಯೆ 1,10,170 (1980).

	ಜಾನ್ ಅಕ್ಸ್‍ಲಿ ಈ ನಗರ ಪ್ರದೇಶವನ್ನು ಪ್ರಥಮವಾಗಿ 1823ರಲ್ಲಿ ಅನ್ವೇಷಿಸಿದ. ನ್ಯೂಸೌತ್‍ವೇಲ್ಸಿನ ಗವರ್ನರ್ ಆಗಿದ್ದ ಸರ್‍ತಾಮಸ್ ಬ್ರಿಸ್ಬೇನಿನ ಗೌರವಾರ್ಥ ಈ ನಗರಕ್ಕೆ ಬ್ರಿಸ್ಬೇನ್ ಎಂದು ನಾಮಕರಣಮಾಡಲಾಯಿತು (1834). 1859ರಲ್ಲಿ ಕ್ವೀನ್ಸ್‍ಲೆಂಡಿನ ರಾಜಧಾನಿಯಾಯಿತು. 1920ರಲ್ಲಿ ದಕ್ಷಿಣ ಬ್ರಿಸ್ಬೇನ್ ನಗರವನ್ನು ಈ ನಗರದೊಡನೆ ಒಂದುಗೂಡಿಸಿ ಬ್ರಿಸ್ಬೇನ್ ಮಹಾನಗರದ ರಚನೆಯಾಯಿತು. ಇಲ್ಲಿ ಕ್ವೀನ್ಸ್‍ಲೆಂಡ್ ವಿಶ್ವವಿದ್ಯಾಲಯ (1909) ಮತ್ತು ಹಲವಾರು ಗ್ರಂಥಾಲಯಗಳಿವೆ. ಇದೊಂದು ಕೈಗಾರಿಕೆಗಳ ಮತ್ತು ಉದ್ಯೋಗಗಳ ಕೇಂದ್ರ ನಗರ. ಗೋದಿ, ಉಣ್ಣೆ, ಹೈನು ಉತ್ಪನ್ನಗಳು ಸಂಸ್ಕರಿತ ಆಹಾರಪದಾರ್ಥಗಳು ಇಲ್ಲಿಯ ಮುಖ್ಯವ್ಯಾಪಾರ ವಸ್ತುಗಳು. ರೈಲು ಮತ್ತು ಹೆದ್ದಾರಿಯ ಕೇಂದ್ರ. ಪ್ರಸಿದ್ಧ ಹಡಗುಕಟ್ಟೆ. ಸಿಮೆಂಟ್, ರಬ್ಬರ್ ವಸ್ತುಗಳು, ಗೊಬ್ಬರ, ಮುಂತಾದ ಕಾರ್ಖಾನೆಗಳಿವೆ. ಪಾರ್ಲಿಮೆಂಟ್‍ಭವನ (1869) ರಾಜ್ಯವಸ್ತುಸಂಗ್ರಹಶಾಲೆ (1855) ಮತ್ತು ವಿವಿಧ ಇಗರ್ಜಿಗಳು, ಇವೆ. ಇಡೀ ನಗರಪ್ರದೇಶ ಸುಮಾರು 194 ಕಿಮೀ. ದೂರದ ವಿದ್ಯುತ್‍ರೈಲು ಮಾರ್ಗಗಳಿಂದ ಕೂಡಿದೆ. ಎರಡುವಿಮಾನ ನಿಲ್ದಾಣಗಳಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ